Sunday, 25 December 2016

ಮಹಾ ಧನ್ವಂತರಿ ಯಾಗ

ಡಿಸೆಂಬರ್ 30ರಂದು ಗೆಜ್ಜೆಗಿರಿಯಲ್ಲಿ ಮಹಾ ಧನ್ವಂತರಿ ಯಾಗ

ಪುತ್ತೂರು: ದೇಯಿ ಬೈದ್ಯೆತಿ ಕೋಟಿ ಚೆನ್ನಯ ಮೂಲಸ್ಥಾನವಾದ ಪುತ್ತೂರು ತಾಲೂಕಿನ ಗೆಜ್ಜೆಗಿರಿ ನಂದನ ಬಿತ್ತ್ ಲ್ ನಲ್ಲಿ ಡಿಸೆಂಬರ್ 30ರಂದು ಅತ್ಯಪೂವ೯ ಧನ್ವಂತರಿ ಮಹಾ ಯಾಗ ನಡೆಯಲಿದೆ ಎಂದು ಮೂಲಸ್ಥಾನ ಕ್ಷೇತ್ರಾಡಳಿತ ಸಮಿತಿ ಪ್ರಕಟಣೆ ತಿಳಿಸಿದೆ.

ಐನೂರು ವಷ೯ಗಳ ಹಿಂದೆ ಗುರು ಸಾಯನ ಬೈದ್ಯರು ಮತ್ತು ಮಾತೆ ದೇಯಿ ಬೈದ್ಯೆತಿಯ ಬೈದ್ಯ ಶಕ್ತಿಯಿಂದ ಪಾವನಗೊಂಡಿದ್ದ ಈ ಮಣ್ಣಲ್ಲಿ ಆ ಚೈತನ್ಯಕ್ಕೆ ಇನ್ನಷ್ಟು ಚೈತನ್ಯ ನೀಡುವ ಉದ್ದೇಶದಿಂದ ಅಷ್ಟಮಂಗಲ ಚಿಂತನೆಯಲ್ಲಿ ಕಂಡು ಬಂದ ಪ್ರಕಾರ ಈ ಮಹಾ ಯಾಗ ನಡೆಯಲಿದೆ.

ಡಿ.29ರಂದು ಸಂಜೆ ಪ್ರಾಥ೯ನೆ ನಡೆದು ಲಕ್ಷ ಧನ್ವಂತರಿ ಜಪ ಆರಂಭಗೊಳ್ಳಲಿದೆ. ಸುಮಾರು ನೂರಕ್ಕಿಂತಲೂ ಅಧಿಕ ಶಾಂತಿ ವಗ೯ದ ಪುರೋಹಿತರು ಕ್ಷೇತ್ರದ ತಂತ್ರಿ ಲೋಕೇಶ್ ಶಾಂತಿ ಅವರ ನೇತೃತ್ವದಲ್ಲಿ ಜಪ ಯಜ್ನ ನಡೆಸಲಿದ್ದಾರೆ.

ಡಿ.30ರಂದು ಮುಂಜಾನೆ ಯಾಗ ಆರಂಭಗೊಳ್ಳುತ್ತದೆ. ಮಧ್ಯಾಹ್ನ ಪೂಣಾ೯ಹುತಿ ನಡೆದು ಯಾಗ ಸಂಪನ್ನಗೊಳ್ಳಲಿದೆ. ಕರಾವಳಿ ಪ್ರಾಂತ್ಯದಲ್ಲಿ ತೀರಾ ಅಪೂವ೯ವಾಗಿ ನಡೆಯುವ ಯಾಗ ಇದಾಗಿದ್ದು ಲಕ್ಷಾಂತರ ರೂ. ವೆಚ್ಚ ತಗುಲಲಿದೆ.

ಡಿಸೆಂಬರ್ 31ರಂದು ಬೆಳಗ್ಗೆ ಲಘು ವಿಷ್ಣು ಯಾಗ ಮತ್ತು ಸಂಜೆ ಭೂ ವರಾಹ ಹೋಮ ನಡೆದು ಮೂಲಸ್ಥಾನ ಕ್ಷೇತ್ರ ನಿಮಾ೯ಣಕ್ಕೆ ವೇದಿಕೆ ಸಜ್ಜಾಗಲಿದೆ. ಈ ಅಪೂವ೯ ಯಾಗದಲ್ಲಿ ಹತ್ತು ಸಾವಿರ ಅಶ್ವತ್ಥ ಎಲೆ, ಹತ್ತು ಸಾವಿರ ಅಮೃತ ಬಳ್ಳಿ ಕಡ್ಡಿ, ಹತ್ತು ಸಾವಿರ ಎಕ್ಕಮಾಲೆ ಕಡ್ಡಿ, ಸಾವಿರಾರು ಕಮಲದ ಹೂಗಳು ಸೇರಿದಂತೆ ಅಪಾರ ಪ್ರಮಾಣದ ಸುವಸ್ತುಗಳ ಬಳಕೆ ಆಗಲಿದೆ.
ಯಾಗಕ್ಕಾಗಿ ಈಗಾಗಲೇ ಕ್ಷೇತ್ರದಲ್ಲಿ ಸಿದ್ಧತೆ ನಡೆದಿದೆ. ಐದು ಅಡಿ ಹದಿನೆಂಟು ಅಂಗುಲ ಉದ್ದ, ಅಗಲ ಮತ್ತು ಆಳದ ಯಾಗ ಕುಂಡ ತಯಾರಾಗುತ್ತಿದೆ.

ಜನವರಿ 1ರಂದು ಭಾನುವಾರ ಬಾಲಾಲಯ ಪ್ರತಿಷ್ಠೆ ನಡೆಯಲಿದ್ದು, ಈಗಾಗಲೇ ಎರಡು ಬಾಲಾಲಯಗಳ ನಿಮಾ೯ಣ ಕಾಯ೯ ನಡೆಯುತ್ತಿದೆ.

ಕ್ಷೇತ್ರದ ಪೂರಕ ಅಭಿವೃದ್ಧಿಗಾಗಿ ಖರೀದಿಸಲಾದ ಆರು ಎಕರೆ ಜಾಗದಲ್ಲಿ ಈಗ ಶುಚೀಕರಣ ಕೆಲಸ ನಡೆಯುತ್ತಿದೆ. ದಿನಂಪ್ರತಿ ಹತ್ತು ಆಳುಗಳು ಕೆಲಸ ಮಾಡುತ್ತಿದ್ದಾರೆ. ಈ ಜಾಗದಲ್ಲಿರುವ ತೋಟದ ಮನೆಯ ದುರಸ್ತಿ ಕಾಯ೯ವೂ ನಡೆಯುತ್ತಿದೆ.

ಕಳೆದ 2016ರ ಜನವರಿ‌ ಮತ್ತು ಮಾಚ್೯ನಲ್ಲಿ ಗೆಜ್ಜೆಗಿರಿ ನಂದನ ಬಿತ್ತ್ ಲ್ ನಲ್ಲಿ ಅಷ್ಟಮಂಗಲ ಚಿಂತನೆ ನಡೆದ ಬಳಿಕ ಅದರಂತೆ ಹಂತ ಹಂತದ ಕೆಲಸಗಳು ನಡೆಯುತ್ತಿವೆ.

ಮೊದಲ ಹಂತದಲ್ಲಿ ತೀಥ೯ ಬಾವಿಯ ಪುನರುತ್ಥಾನ ನಡೆಯಿತು. ಎರಡನೇ ಹಂತದಲ್ಲಿ ಏಪ್ರಿಲ್ 29, 2016ರಂದು ಕೋಟಿ ಚೆನ್ನಯ ಮೂಲಸ್ಥಾನ ಗರಡಿ ಮತ್ತು ಸಾಯನ ಬೈದ್ಯರು- ದೇಯಿ ಬೈದ್ಯೆತಿ ಧಮ೯ ಚಾವಡಿ ನಿಮಾ೯ಣಕ್ಕೆ ಶಿಲಾ‌ ಪರಿಗ್ರಹ, ಶಿಲಾ ಪೂಜನ ನಡೆಯಿತು.

ಮುಂದಿನ ಹಂತದಲ್ಲಿ ನವೆಂಬರ್ 12,13ರಂದು ಕ್ಷೇತ್ರದ ಆದಿ ದೈವ ಧೂಮಾವತಿ ಮತ್ತು ಪರಿವಾರ ದೈವಗಳ ನೇಮೋತ್ಣವ, ಯಜಮಾನ ಗಡಿ ಪ್ರದಾನ ಹಾಗೂ ಸ್ವಣ೯ ನಿಧಿ ಕುಂಭ ಸ್ಥಾಪನೆ ನಡೆಯಿತು.
ಇವೆಲ್ಲದರ ಮುಂದಿನ ಹಂತದಲ್ಲಿ ಮಹಾ ಯಾಗ ನಡೆಯಲಿದೆ.

2017ರ ಫೆಬ್ರುವರಿ 19ರಂದು ಭಾನುವಾರ ಕ್ಷೇತ್ರ ಪುನರುತ್ಥಾನಕ್ಕೆ ಶಿಲಾನ್ಯಾಸ ನಡೆಯಲಿದೆ.
ಧೂಮಾವತಿ - ಕುಪ್ಪೆ ಪಂಜುಲಿ೯ ದೈವಸ್ಥಾನ, ಬೆಮೆ೯ರ್ ಗುಂಡ, ಗುರು ಸಾಯನ ಬೈದ್ಯರು ಮತ್ತು ಮಾತೆ ದೇಯಿ ಬೈದ್ಯೆತಿ ಧಮ೯ ಚಾವಡಿ, ಕೋಟಿ ಚೆನ್ನಯ ಮೂಲಸ್ಥಾನ ಗರಡಿ, ಮಾತೆಯ ಮಹಾ ಸಮಾಧಿ, ಚಾರಿತ್ರಿಕ ಸರೋಳಿ ಸೈಮಂಜ ಕಟ್ಟೆ ಈ ಸಾನಿಧ್ಯಗಳಿಗೆ ಶಿಲಾನ್ಯಾಸ ಕಾಯ೯ಕ್ರಮ, ಸಭಾ ಕಾಯ೯ಕ್ರಮ ನಡೆಯಲಿದೆ.

ಇದಕ್ಕೂ ಮುನ್ನ ಅಂದು ಬೆಳಗ್ಗೆ 9 ಗಂಟೆಗೆ ಪುತ್ತೂರು ನಗರದ ದಬೆ೯ ಬಳಿಯ ಗೆಜ್ಜೆಗಿರಿ ಮಹಾ ದ್ವಾರದ ಬಳಿಯಿಂದ ಬೃಹತ್ ವಾಹನ ಜಾಥಾ ನಡೆಯಲಿದೆ. ನಾನಾ ತಾಲೂಕುಗಳಿಂದ ಬರುವ ಭಕ್ತರು ಇಲ್ಲಿಂದ ಜಾಥಾದಲ್ಲಿ 22 k.m. ದೂರದ ಗೆಜ್ಜೆಗಿರಿಗೆ ತೆರಳಲಿದ್ದಾರೆ. ಜಾಥಾದಲ್ಲಿ ಪಾಲ್ಗೊಳ್ಲುವ ಎಲ್ಲ ವಾಹಗಳಲ್ಲಿ ಕ್ಷೇತ್ರದ ಪತಾಕೆ ಇರಲಿದೆ.

ಮೇಲಿನ ಎಲ್ಲ ಕಾಯ೯ಕ್ರಮಗಳಲ್ಲಿ ಸವ೯ ಕೋಟಿ ಚೆನ್ನಯ ಭಕ್ತರು ಪಾಲ್ಗೊಂಡು ದೇಯಿ ಬೈದ್ಯೆತಿ ಕೋಟಿ ಚೆನ್ನಯ ಮೂಲಸ್ಥಾನದ ಮಹಾ ಪವ೯ಕ್ಕೆ ತನು ಮನ ಧನಗಳ ನೆರವು ನೀಡಬೇಕೆಂದು ಕ್ಷೇತ್ರಾಡಳಿತ ಸಮಿತಿ ವಿನಂತಿಸಿದೆ.

ತುಳುನಾಡಿನಲ್ಲಿರುವ ಎಲ್ಲ ಗರಡಿಗಳಿಗೂ ಮೂಲವಾಗಲಿರುವ, ಈ ಮೂಲಸ್ಥಾನ ಗರಡಿಯ ನಿಮಾ೯ಣದಲ್ಲಿ ಎಲ್ಲರೂ ಭಾಗವಹಿಸಬೇಕೆಂದು ಪ್ರಾಥ೯ನೆ.

ಐನೂರು ವಷ೯ಗಳಲ್ಲಿ ನಡೆಯದ ಐತಿಹಾಸಿಕ ವಿದ್ಯಮಾನ ಈಗ ನಡೆಯುತ್ತಿದೆ ಎಂಬ ಹೆಮ್ಮೆ ನಮ್ಮಲ್ಲಿರಲಿ.

Tuesday, 20 December 2016

ಶ್ರೀ ಕ್ಷೇತ್ರ ಗೆಜ್ಜೆಗಿರಿ

ಶ್ರೀ ಕ್ಷೇತ್ರದ ಸೇವೆ ಮಲ್ಪುನ "ಓಮನ್ ಬಿಲ್ಲವಾಸ್" ಸಂಘಟನೆದ ಮಾತಾ ಸದಸ್ಯೆರೆಗ್ ಕ್ಷೇತ್ರದ ಸರ್ವ ಶಕ್ತಿಲು ಆಯುರಾರೋಗ್ಯನು ಕೊರುದು ಅಕ್ಲೆನ ಕೆಲಸಡ್ ಬೆಲಿಸಾಯ ಆದ್ ಉಂತಡ್ ಪಂದ್ ನಮ್ಮ ಪ್ರಾರ್ಥನೆ.

Tuesday, 13 December 2016

ಶ್ರೀ ಅಯ್ಯಪ್ಪ ಸ್ವಾಮಿ ಮಹಾಪೂಜೆ ಕಲೀನ ಮುಂಬೈ

ಪ್ರಿಯಾ ಸಧ್ಭಕ್ತರೆ,
ಇದೇ ಬರುವ ಆದಿತ್ಯವಾರ ತಾ. 18/12/16 ರಂದು ಶ್ರೀ ಅಯ್ಯಪ್ಪ ಸ್ವಾಮಿ ಸೇವಾ ಸಮಿತಿ (ರಿ) ಕಲೀನ ಇದರ 5ನೇ ವರ್ಷದ ಅಯ್ಯಪ್ಪ ಸ್ವಾಮಿ ಮಹಾ ಪೂಜೆ ನಡೆಯಲಿದ್ದು, ಅಂದಿನ ದಿನ "ಗೆಜ್ಜೆಗಿರಿ ನಂದನ" ಕೋಟಿ-ಚೆನ್ನಯ ಮೂಲಸ್ಥಾನ ಶ್ರೀ ಕ್ಷೇತ್ರ ಗೆಜ್ಜೆಗಿರಿ ನಂದನ ಬಿತ್ತ್ ಲ್ ನ ಮಹಿಮೆಯನ್ನು ಸಾರುವ ಸುಮಧುರವಾದ ಭಕ್ತಿಗೀತೆ ಅಡಿಯೋ ಸಿಡಿಯ ಬಿಡುಗಡೆಗೊಳ್ಳಲಿದ್ದು ನಿರ್ಮಾಪಕರಾದ  ಶ್ರೀ ರಮೇಶ್ ಸಾಲಿಯಾನ್ ಬಜಗೋಳಿ, ನಾಗೇಶ್ ಪೂಜಾರಿ ಇರುವೈಲು, ಸಂತೋಷ್ ಪೂಜಾರಿ ಇನ್ನ, ರವೀಂದ್ರ ಕರ್ಕೆರ,ಲೀಲಾಗಣೇಶ್ ಪೂಜಾರಿ  ಸಿಡಿ ಯನ್ನು ಬಿಡುಗಡೆ ಮಾಡಲಿದ್ದಾರೆ. ಇದರಿಂದ ಸಂಗ್ರಹವಾದ  ನಿಧಿಯನ್ನು ಶ್ರೀ ಕ್ಷೇತ್ರ ಗೆಜ್ಜೆಗಿರಿ  ನಂದನ ಬಿತ್ತ್ ಲ್ ಕ್ಷೇತ್ರಾಭಿವೃದ್ದಿ ಜೀರ್ಣೋದ್ಧಾರಕ್ಕೆ ಸಂಪೂರ್ಣ ಸೇವಾ ರೂಪಕವಾಗಿ  ಶ್ರೀ ಕ್ಷೇತ್ರಕ್ಕೆ ಅರ್ಪಣೆ ಆಗಲಿದೆ. ಹಾಗಾಗಿ ಪ್ರತಿ ಒಬ್ಬರು ಸಿಡಿಯನ್ನು ತೆಗೆದುಕೊಂಡು ಶ್ರೀ ಕ್ಷೇತ್ರ ಗೆಜ್ಜೆಗಿರಿ ನಂದನ ಬಿತ್ತಿಲ್ ಗೆ ನೀವೂ ಅರ್ಪೀಸುವ ಕಾಣಿಕೆ ಎಂದು ತಿಳಿದು, ಎಲ್ಲರೂ ಈ ಒಳ್ಳೆಯ ಕೆಲಸಕ್ಕೆ ಒಂದೊಂದು ಸಿಡಿಯನ್ನು ತೆಗೆದುಕೊಂಡು ಶ್ರೀ ಕ್ಷೇತ್ರದ ಜೀರ್ಣೋದ್ಧಾರ ಕೆಲಸಕ್ಕೆ ಕೈ ಜೋಡಿಸಬೇಕಾಗಿ ವಿನಂತಿಸುತ್ತಿದ್ದೇವೆ 🙏�🙏.

Monday, 12 December 2016

ಮುಂಬೈ ಗೆಜ್ಜೆಗಿರಿ ಸಿ.ಡಿ‌ ಬಿಡುಗಡೆ

ಶ್ರೀ ಕ್ಷೇತ್ರದ ಒಂದು ‌ನೋಟ

ಕೊಡಗು ಜಿಲ್ಲಾ ಕೋಟಿ ಚೆನ್ನಯ ಕ್ರೀಡಾಕೂಟ

ಕೊಡಗು ಜಿಲ್ಲೆಯ ಶೂಂಠಿಕೊಪ್ಪದಲ್ಲಿ ಇಂದು ತಾರೀಕು ಡಿಸೆಂಬರ್ 12 ರಂದ್ದು ನಡೆದ ಕೊಡಗು ಜಿಲ್ಲಾ ಮಟ್ಟದ ಕೋಟಿ-ಚೆನ್ನಯ ಕ್ರೀಢಾಕೂಟ 2016 ರ ಬಿರುವೆರೆ ಚಾವಡಿ  ಸಮಾರೋಪ ಸಮಾರಂಭದ ಕಾರ್ಯಕ್ರಮದಲ್ಲಿ  ಕಿಕ್ಕಿರಿದು ಸೇರಿದ ಬಿಲ್ಲವರ ಬಾಂಧವರ ಜನಸ್ತೋಮದಲ್ಲಿ ಕೋಟಿ-ಚೆನ್ನಯ ಮೂಲಸ್ಥಾನ ಶ್ರೀ ಕ್ಷೇತ್ರ ಗೆಜ್ಜೆಗಿರಿ ಕ್ಷೇತ್ರದ ಮಹಿಮೆಯನ್ನು ಸಾರುವ ಗೆಜ್ಜೆಗಿರಿ ನಂದನ ತುಳು ಭಕ್ತಿಗೀತೆ ಸಿ.ಡಿ ಕೇಸೆಟನ್ನು ಬಿಡುಗಡೆ ಮಾಡಲಾಯಿತು ಈ ಸಂದರ್ಭದಲ್ಲಿ ಕ್ಷೇತ್ರಾಡಳಿತದ ಸಮಿತಿಯ  ಅಧ್ಯಕ್ಷರಾದ ಶ್ರೀ ಚಿತ್ತರಂಜನ್ ಪೂಜಾರಿ, ಕಾರ್ಯಧ್ಯಕ್ಷರಾದ ಶ್ರೀ ಪಿತಾಂಬರ್ ಹೆರಾಜೆ, ಶ್ರೀ ಜಯಂತ ನಡುಬೈಲು, ಶ್ರೀ ಉಲ್ಲಾಸ್ ಕೊಟ್ಯಾನ್ ಹಾಗೂ ಕೊಡಗು ಜಿಲ್ಲಾ ಬಿಲ್ಲವ ಅಧ್ಯಕ್ಷರಾದ ಶ್ರೀ ಆನಂದ ರಘು, ಆರು ತಾಲೂಕಿನ ಬಿಲ್ಲವ ಅಧ್ಯಕ್ಷರು, ಮೂರು ಸ್ಥಳಿಯ ಶಾಸಕರು, ಗಣ್ಯ ಅತಿಥಿಗಳು ಮತ್ತು ಸಾವಿರಾರು ಸಂಖ್ಯೆಯಲ್ಲಿ ಸೇರಿದ ಬಿಲ್ಲವ ಬಾಂಧವರು ಪಾಲ್ಗೊಂಡು ಯಶಸ್ವಿಯಾಗಿ ನಡೆಸಿಕೊಟ್ಟರು.

ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡ 
ಕೊಡಗು ಜಿಲ್ಲಾ ಬಿಲ್ಲವ ಸಮಾಜ ಬಾಂಧವರಿಗೆ ಶ್ರೀ ಕ್ಷೇತ್ರ ಗೆಜ್ಜೆಗಿರಿ ಕ್ಷೇತ್ರದ ಸರ್ವ ಶಕ್ತಿಗಲು ಅನುಗ್ರಹಿಸಲಿ.
ಸ್ವಾಮಿ ಬ್ರಹ್ಮ ಬೈದೆರ್ಲೆ🙏

Sunday, 11 December 2016

ಮುಲ್ಕಿ ಯುವವಾಹಿನಿ ವತಿಯಿಂದ ಶ್ರೀ ಕ್ಷೇತ್ರಕ್ಕೆ ಗಡಿಯಾರ ಕೊಡುಗೆ

ಮೂಲ್ಕಿ ಯುವವಾಹಿನಿಯ 55 ಜನರ ತಂಡ ಇವತ್ತು ಗೆಜ್ಜೆಗಿರಿ ನಂದನ ಬಿತ್ತ್ ಲ್ ಕ್ಷೇತ್ರಕ್ಕೆ ಭೇಟಿ ನೀಡಿ, ಯುವವಾಹಿನಿ ವತಿಯಿಂದ ಒಂದು ಗಡಿಯಾರವನ್ನು ಕ್ಷೇತ್ರಕ್ಕೆ ನೀಡಿದರು. ನಿಲ್ಲದೇ ಸದಾ ಓಡುತ್ತಿರುವ ಕಾಲದಂತೆ ಕ್ಷೇತ್ರದ ಅಭಿವ್ರದ್ದಿ ಕಾಯ೯ ಸದಾ ಸಾಗುತ್ತಿರಲಿ ಎಂದು ಹಾರೈಸಿದರು.

Saturday, 10 December 2016

ಮುಲ್ಕಿ ಯುವವಾಹಿನಿ

ಮುಲ್ಕಿಯ ಯುವವಾಹಿನಿ ತಂಡದ ಸದಸ್ಯರು ಶ್ರೀ ಕ್ಷೇತ್ರಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದರು.

Monday, 28 November 2016

ಶ್ರೀ ಕ್ಷೇತ್ರ ಗೆಜ್ಜೆಗಿರಿ ನಂದನ ಬಿತ್ತ್ ಲ್

ಬಿಲ್ಲವ ಸಮಾಜದ ಆರಾಧನಾ ಕೇಂದ್ರ
ಕೋಟಿ-ಚೆನ್ನಯ ಮೂಲಸ್ಥಾನ
ಶ್ರೀ ಕ್ಷೇತ್ರ ಗೆಜ್ಜೆಗಿರಿ ನಂದನ ಬಿತ್ತ್‌ಲ್‌ನಲ್ಲಿ ಇರುವ ಕ್ಷೇತ್ರದ ಜಾಗವನ್ನು ಸಮತಟ್ಟು ಮಾಡುವ ಕೆಲಸ ಕಾರ್ಯಗಳು ಶ್ರೀ ಕ್ಷೇತ್ರದಲ್ಲಿ ಭರದಿಂದ ಸಾಗುತ್ತಿದೆ.

ಶ್ರೀ ನವೀನ್ ಸುವರ್ಣರವರ ನೇತೃತ್ವದಲ್ಲಿ ಶ್ರೀ ಕ್ಷೇತ್ರದ ಜಾಗವನ್ನು ಸಮತಟ್ಟು ಮಾಡುವ ಸಂಪೂರ್ಣ ಕೆಲಸ ಕಾರ್ಯವನ್ನು ವಹಿಸಿಕೊಂಡು ಬಹುದೊಡ್ಡ ಮೊತ್ತದ ಕೊಡುಗೆಯನ್ನು ಶ್ರೀ ಕ್ಷೇತ್ರಕ್ಕೆ ತಮ್ಮ ಉಚಿತ ಸೇವೆಯ ರೂಪದಲ್ಲಿ ಮಾಡುತ್ತಿದ್ದಾರೆ.
ಹಾಗೂ ಇವರಿಗೆ ಮಾತೃಭೂಮಿ ಡೆವಲ್ಪರ್ಸ್ ಮಂಗಳೂರಿನ ಬೈಕಂಪಾಡಿಯಲ್ಲಿ ಜೆಸಿಬಿ ಕಂಪನಿ ಇದ್ದು ಇವರ ಜೆಸಿಬಿ, ಟಿಪ್ಪರ್ ಹಾಗೂ ಶ್ರೀ ಸುಶಾನ್ ಸುವರ್ಣ ಮತ್ತು ಶ್ರೀ ಸತೀಶ್ ಇರುವೈಲ್ ಇವರ ಮೂಲಕ ಶ್ರೀ ಕ್ಷೇತ್ರ ಗೆಜ್ಜೆಗಿರಿ ನಂದನ ಬಿತ್ತ್‌ಲ್‌ನಲ್ಲಿ ತಮ್ಮ ನಿಸ್ವಾರ್ಥ ಸೇವೆಯ ಮೂಲಕ ಶ್ರೀ ಕ್ಷೇತ್ರದ ಜಾಗವನ್ನು ಅಕ್ಕೋಬರ್ 26 ತಾರೀಕಿನಿಂದ  ದಿನದಲ್ಲಿ 12 & 18 ಗಂಟೆಗಳ ಕಾಲ ನಿರಂತರ ಜೆಸಿಬಿ ಚಾಲನೆಯಲ್ಲಿ ಇದ್ದು ಕ್ಷೇತ್ರದ ಜಾಗವನ್ನು ಸಮತಟ್ಟು ಮಾಡುವ ಕೆಲಸ ಕಾರ್ಯವನ್ನು ಯಶಸ್ವಿಯಾಗಿ ನಡೆಸಿ ಕೊಡುತ್ತಿದ್ದಾರೆ.

ಶ್ರೀ ಕ್ಷೇತ್ರದ ಜಾಗವನ್ನು ಸಮತಟ್ಟು ಮಾಡುವ ಕೆಲಸ ಕಾರ್ಯವನ್ನು ಶ್ರೀ ಕ್ಷೇತ್ರಕ್ಕೆ ಉಚಿತ ಸೇವೆ ಮಾಡುತ್ತಿರುವ ಶ್ರೀ ನವೀನ್ ಸುವರ್ಣ ಹಾಗೂ ಅವರ ಕುಟುಂಬದವರಿಗೆ ಆದಿ ಧರ್ಮದೈವ ಧೂಮಾವತಿಯ, ಕ್ಷೇತ್ರದ ಪರಿವಾರ ದೈವಗಳ ಮಾತೆ ದೇಯಿಬೈದ್ಯೆತಿಯವರ ಗುರು ಸಾಯನ ಬೈದ್ಯರ ಹಾಗೂ ಕೋಟಿ-ಚೆನ್ನಯರ ಅನುಗ್ರಹ ಸದಾ ಇರಲಿ ಅಂತ ಕೇಳಿಕೊಳ್ಳುತ್ತೇವೆ.
ಸ್ವಾಮಿ ಬ್ರಹ್ಮ ಬೈದ್ಯರೇ🙏

28/11/2016

ಅವಳಿ ವೀರರು ಕೋಟಿ ಚೆನ್ನಯರು

ಕೋಟಿ-ಚೆನ್ನಯರ ಕಾಲದಲ್ಲಿ ಸಣ್ಣಪುಟ್ಟ ತುಂಡರಸರ ಅವರ ಕೈಕೆಳಗಿನ ಮಂತ್ರಿ, ಸೇನಾಪತಿ ಮೊದಲಾದವರ ದೌರ್ಜನ್ಯ ದಬ್ಬಾಳಿಕೆಯನ್ನು ಪ್ರತಿಭಟಿಸುವರೇ ಇರಲಿಲ್ಲ. ಎದುರಾಡಿದವ ಹೆಣವಾಗುತ್ತಿದ್ದ. ಇಲ್ಲವೆ ಪೆಟ್ಟು ತಿನ್ನುತ್ತಿದ್ದ. ಇಂತಹ ಕಾಲಘಟ್ಟದಲ್ಲಿ ಅನ್ಯಾಯವನ್ನು ಪ್ರತಿಭಟಿಸಿ ದುಷ್ಟಮಂತ್ರಿಗೆ ಅಂತ್ಯ ಕಾಣಿಸಿದ ಈ ವೀರರು ತಮ್ಮ ಅಸಾಮಾನ್ಯ ಸಾಧನೆಯಿಂದ ತುಳುನಾಡಿನ ಜನರ ಪಾಲಿಗೆ ಅತಿಮಾನುಷರೆನೆಸಿಕೊಳ್ಳುತ್ತಾರೆ. ಕೆಚ್ಚೆದೆಯ ಈ ಯಮಳ ವೀರರು ನ್ಯಾಯ ಧರ್ಮಕ್ಕಾಗಿ ತಮ್ಮ ಜೀವನವನ್ನೆ ಮುಡಿಪಾಗಿಟ್ಟು ವೀರ ಮರಣವನ್ನು ಪಡೆದರು. (ಅವಿವಾಹಿತರಾಗಿದ್ದ ಅವರಿಗೆ ಮರಣ ಕಾಲದಲ್ಲಿ 37 ವರ್ಷ ವಯಸ್ಸಾಗಿತ್ತು ಎಂದು ಹೇಳುತ್ತಾರೆ) ಅವರ ಅಸಾಮಾನ್ಯ ಧರ್ಯ ಸಾಹಸಗಳು, ದೌರ್ಜನ್ಯ ದಬ್ಬಾಳಿಕೆಯ ವಿರುದ್ಧವಾದ ನ್ಯಾಯ ಪರವಾದ ಹೋರಾಟವು ಶೋಷಿತರ ಪ್ರತಿಭಟನಾತ್ಮಕ ಧ್ವನಿಯಾಗಿದೆ. ಈ ಪ್ರತಿಭಟನೆಯ ಮೂಲ ಪುರುಷರಾದ ಕೋಟಿ-ಚೆನ್ನಯರು ಅವರ ಆರಾಧ್ಯ ಪುರುಷರಾಗಿ ಶಾಶ್ವತ ಸ್ಥಾನ ಪಡೆದಿರುತ್ತಾರೆ. ಶೋಷಿತ ವರ್ಗದ ಜನರ ಆಂತರ್ಯದ ನೋವು ದೌರ್ಜನ್ಯದ ವಿರುದ್ಧ ಸಮರ ಸಾರಿದ ಬೈದರ್ಕಳರನ್ನು ಆರಾಧ್ಯ ದೈವವಾಗಿ ಸ್ವೀಕರಿಸುವಂತೆ ಮಾಡಿತು. ಅತಿಮಾನುಷರಾದ ಬೈದರ್ಕಳರು ತಮ್ಮ ವೀರ ಅವಸಾನದ ನಂತರವೂ ಜನ್ರ ಸಂಕಷ್ಟಗಳನ್ನು ಪರಿಹರಿಸುವ ಬೇಡಿಕೆಗಳನ್ನು ಈಡೇರಿಸುವ ಕಾರಣಿಕದ ದೈವಗಳಾಗಿ
"ನ್ಯಾಯೊಗು ತಿಗಲೆಡ್ ಸಾದಿ ಕೊರ್ಪ"
"ಅನ್ಯಾಯೊಗು ಸುರಿಯೊಡು ಸಾದಿ ಕೊರ್ಪ"
"ನಂಬಿನಕ್ಲೆಗ್ ಇಂಬು ಕೊರ್ಪ"
"ಸತ್ಯ ಗೆಂದಾದ್ ಕೊರ್ಪ"
ಎಂಬ ಅಭಯದ ನುಡಿಯಲ್ಲಿ ತುಳುನಾಡಿನಾದ್ಯಂತ ಗರೋಡಿಗಳಲ್ಲಿ ಆರಾಧನೆಗೆ ಒಳಪಟ್ಟಿದ್ದಾರೆ.
ಈಗ ತುಳುನಾಡಿನ ಕಲೆ ಕಾರಣಿಕದ ವೀರ ಪುರುಷರಾದ ಕೋಟಿ-ಚೆನ್ನಯ ಮೂಲಸ್ಥಾನವಾದ ಶ್ರೀ ಕ್ಷೇತ್ರ ಗೆಜ್ಜೆಗಿರಿ ನಂದನ ಬಿತ್ತ್‌ಲ್‌ನಲ್ಲಿ ಕೋಟಿ-ಚೆನ್ನಯರ ಗರೋಡಿ ನಿರ್ಮಣನಕ್ಕೆ ಚಾಲನೆ ಸಿಕ್ಕಿರುವುದು ತುಳುನಾಡಿನಾದ್ಯಂತ ಕೋಟಿ-ಚೆನ್ನಯ ಭಕ್ತರಿಗೆ ಹೊಸ ಸಂಚಲನವನ್ನು ಮೂಡಿಸಿದೆ.

Wednesday, 23 November 2016

ಕೋಟಿ‌ ಚೆನ್ನಯರ ಮೂಲ ಸ್ಥಾನ ಗೆಜ್ಜೆಗಿರಿ

ಗೆಜ್ಜೆಗಿರಿ ನಂದನ ಬಿತ್ತ್ ಲ್ ಗೆ ಕೋಟಿ ಚೆನ್ನಯ
ಮೂಲಸ್ಥಾನ ಎಂಬ ಹೆಸರು ಯಾಕೆ ಬಂತು?

ಪುತ್ತೂರು ತಾಲೂಕಿನ ಪಡುಮಲೆ ಎಂಬ ಹಳ್ಳಿಯಲ್ಲಿರುವ ಗೆಜ್ಜೆಗಿರಿ ನಂದನ ಬಿತ್ತ್ ಲ್ ಗೆ ಕೋಟಿ - ಚೆನ್ನಯ ಮೂಲಸ್ಥಾನ ಎಂಬ ಹೆಸರು ಯಾಕಿದೆ? ಇಲ್ಲಿ ಓದಿ...

ಗೆಜ್ಜೆಗಿರಿ ನಂದನ ಬಿತ್ತ್ ಲ್ ಎಂಬುದು ಈ ನೆಲದ ಹೆಸರು. ಇಲ್ಲಿದ್ದ ಬಿಲ್ಲವ ಮನೆತನಕ್ಕೆ ಏರಾಜೆ ಬಾರಿಕೆ (ಅಥವಾ ಏರಾಜೆ ಬರ್ಕೆ.) ಎಂಬ ಹೆಸರು. ಪಡುಮಲೆ ಬಲ್ಲಾಳ ಅರಸರ ವ್ಯಾಪ್ತಿಯಲ್ಲಿದ್ದ 4 ಗುತ್ತು ಮತ್ತು 8 ಬಾರಿಕೆಗಳಲ್ಲಿ ಏರಾಜೆ ಬರ್ಕೆಯೂ ಒಂದು. ಅರಸನಿಗೆ ಆಡಳಿತದಲ್ಲಿ ನೆರವಾಗುತ್ತಿದ್ದ ಮನೆತನವಿದು.

ಬಿರ್ಮಣ ಬೈದ್ಯ ಎಂಬ ಹಿರಿಯರು ಇಲ್ಲಿದ್ದರು. ಅವರ ನಂತರ ಇಲ್ಲಿನ ಯಜಮಾನರಾದವರು ಸಾಯನ ಬೈದ್ಯರು. ಬೈದ್ಯ ವಿದ್ಯೆ, ಮಂತ್ರ ವಿದ್ಯೆ, ಶಸ್ತ್ರ ವಿದ್ಯೆ ಎಲ್ಲವನ್ನೂ ಬಲ್ಲವರು ಇವರು. ಬೈದ್ಯ ವಿದ್ಯೆಗೆ ಶೇಂದಿ ಬೇಕಾದ ಕಾರಣ ಮೂರ್ತೆದಾರಿಕೆ ಕೂಡ ಮಾಡುತ್ತಿದ್ದರು.

ಸಾಯನರ ತಂಗಿ ದೇಯಿ. ಆಕೆಯ ಗಂಡ ಕರ್ಗಲ್ಲ ತೋಟ ಕಾಂತಣ್ಣ ಬೈದ್ಯ. ಕಾಂತಣ್ಣ ಬೈದ್ಯರು ಸಾಯನರ ಸೋದರ ಮಾವನ ಮಗ. ಹಾಗಾಗಿ ಭಾವನನ್ನೇ ದೇಯಿ ವರಿಸಿದ್ದಳು. ಅವರಲ್ಲಿ ಹುಟ್ಟಿದ ಹೆಣ್ಣು ಮಗು ದಾರು. ಬಿರ್ಮಣ್ಣ ಬೈದ್ಯರ ಪತ್ನಿಯ ಹೆಸರೂ ದಾರು. ಅಜ್ಜಿಯ ಹೆಸರನ್ನೇ ಮೊಮ್ಮಗಳಿಗೆ ಇಡುವುದು ಹಿಂದಿನ ಕಾಲದ ಕ್ರಮ. ಈಕೆ ಸಣ್ಣ ದಾರುವಾದ ಕಾರಣ ಕಿನ್ನಿ ದಾರು ಎಂದು ಕರೆಯಲಾರಂಭಿಸಿದರು.

ಈ ನಡುವೆ ದೇಯಿ ಅಕಾಲ ಮರಣಕ್ಕೀಡಾದರು. ಕಿನ್ನಿದಾರುವನ್ನು ಎಳೆಯ ಪ್ರಾಯದಲ್ಲೇ ಪಂಜದ ಮಂತ್ರಿ ಪಯ್ಯ ಬೈದ್ಯರಿಗೆ ಮದುವೆ ಮಾಡಿ ಕೊಡಲಾಯಿತು.

ಇದಾದ ಬಳಿಕ ಸಂಕಮಲೆ ಕಾಡಿಗೆ ಹೋದ ಸಂದರ್ಭದಲ್ಲಿ ಸುವರ್ಣ ಕೇದಗೆ ಎಂಬ ಬಾಲಕಿ ಸಾಯನ ಬೈದ್ಯರಿಗೆ ಸಿಗುತ್ತಾಳೆ. ಸಾಕು ತಂದೆಯಾದ ಬ್ರಾಹ್ಮಣರು ಆಕೆಯನ್ನು ಕಾಡಿನಲ್ಲಿ ಬಿಟ್ಟಿರುತ್ತಾರೆ. ಸಾಯನರು ಈ ಬಾಲಕಿಯನ್ನು ಗೆಜ್ಜೆಗಿರಿಗೆ ಕರೆ ತಂದು ತಂಗಿಯ ಸ್ಥಾನ ನೀಡುತ್ತಾರೆ. ಗತಿಸಿ ಹೋದ ತಂಗಿ ದೇಯಿಯ ಹೆಸರನ್ನೇ ಇಡುತ್ತಾರೆ.  ತನ್ನಲ್ಲಿದ್ದ ಮಂತ್ರ ಮತ್ತು ಬೈದ್ಯ ಶಕ್ತಿಯನ್ನು ದೇಯಿ ಬೈದ್ಯೆತಿಗೆ ಧಾರೆ ಎರೆದು ಕೊಡುತ್ತಾರೆ. ಆಕೆ ಬಿಲ್ಲವ ಹೆಣ್ಣಾಗಿ ಪರಿವರ್ತನೆ ಆಗುತ್ತಾಳೆ. ಏಕಾಂಗಿಯಾಗಿದ್ದ ಕಾಂತಣ್ಣ ಬೈದ್ಯರಿಗೆ ಈಕೆಯನ್ನೂ ಮದುವೆ ಮಾಡುತ್ತಾರೆ.

ಗರ್ಭಿಣಿಯಾದ ದೇಯಿ ಬೈದ್ಯೆತಿ ಮೊದಲ ಹೆರಿಗೆಗಾಗಿ ತನ್ನ ತವರು ಮನೆಯಾದ ಗೆಜ್ಜೆಗಿರಿ ಬರುತ್ತಾರೆ. ಈ ಸಂದರ್ಭದಲ್ಲೇ ಅರಸನ ಕಾಲಿಗೆ ಮದ್ದು ಮಾಡಲು ಕರೆ ಬರುತ್ತದೆ. ಅರಮನೆಗೆ ಹೋದ ದೇಯಿ ಮಾತೆಯ ಔಷಧದಿಂದ ಅರಸರು ಗುಣಮುಖರಾಗುತ್ತಾರೆ.

ತಾನು ಬಂದ ಕೆಲಸ ಆಯಿತೆಂದು ಮಾತೆ ತವರಿಗೆ ಹೊರಟು ಬರುತ್ತಾರೆ. ಗದ್ದೆಯಲ್ಲಿ ಬರುತ್ತಿರುವಾಗ ಹೆರಿಗೆ ನೋವು ಕಾಣಿಸಿಕೊಳ್ಳುತ್ತದೆ. ಬೇರೆ ದಾರಿ ಇಲ್ಲದೆ ಅರಮನೆ ಪಕ್ಕದ ಗುಡಿಸಲಿನಲ್ಲಿ ಹೆರಿಗೆಗೆ ಅವಕಾಶ ಮಾಡಿಕೊಡುತ್ತಾರೆ. ಅವಳಿ ಮಕ್ಕಳ ಜನನವಾಗುತ್ತದೆ. 16ನೇ ದಿನದ ಅಮೆ ಕಳೆಯುವ ಮೊದಲೇ ದೇಯಿ ಮಾತೆ ಕೆರೆಗೆ ಬಿದ್ದು ಪ್ರಾಣ ಕಳೆದುಕೊಳ್ಳುತ್ತಾರೆ.

ಸಹಜವಾಗಿ ಆಕೆಯ ಕಳೇಬರವನ್ನು ಅರಸರು ಗೆಜ್ಜೆಗಿರಿಗೆ ಕಳುಹಿಸಿ ಕೊಡುತ್ತಾರೆ. ಸಾಯನರು ತನ್ನ ನೆಲದಲ್ಲಿ ತಂಗಿಯ ಪಾರ್ಥಿವ ಶರೀರದ ದಫನ ಮಾಡುತ್ತಾರೆ.
ಮಾವ ಸಾಯನರ ಸಮ್ಮುಖ ಅವಳಿ ಮಕ್ಕಳಿಗೆ ಕೋಟಿ - ಚೆನ್ನಯ ಎಂಬ ಹೆಸರನ್ನಿಟ್ಟ ಕುಜುಂಬ ಮುದ್ಯ (ಪೆರುಮಳ ಬಲ್ಲಾಳ) ಅರಸರು ಆರೇಳು ತಿಂಗಳುಗಳ ಬಳಿಕ ಮಕ್ಕಳನ್ನು ಅವರ ಸ್ವಂತ ಮನೆಯಾದ ಗೆಜ್ಜೆಗಿರಿ ಮಾವನೊಂದಿಗೆ ಕಳುಹಿಸಿ ಕೊಡುತ್ತಾರೆ.

ತಮ್ಮ ಸ್ವಂತ ಮನೆಯಾದ ಗೆಜ್ಜೆಗಿರಿಯಲ್ಲೇ ವೀರ ಬಾಲಕರು ಬೆಳೆಯುತ್ತಾರೆ. ಶೈಶಾವಸ್ಥೆಯಲ್ಲೇ ತಂದೆಯೂ ಕಾಲವಾದ ಕಾರಣ ತಾಯಿ ಮತ್ತು ಮಾವನ ಮನೆಯಾದ ಗೆಜ್ಜೆಗಿರಿಯೇ ಅವರ ವಾಸ್ತವ್ಯವ ಮನೆಯೂ ಆಗುತ್ತದೆ. ಪಡುಮಲೆಯಲ್ಲಿ ಇದ್ದಷ್ಟು ಸಮಯ ಅವರು ಇದ್ದಿದ್ದು ಇದೇ ಮನೆಯಲ್ಲಿ.

ಹೀಗಾಗಿ ಗೆಜ್ಜೆಗಿರಿ ಎಂಬುದು ಕೋಟಿ - ಚೆನ್ನಯರ ಸ್ವಂತ ಮನೆಯೂ ಹೌದು, ತಾಯಿಯ ತವರು ಮನೆಯೂ ಹೌದು, ಕುಟುಂಬದ ಧರ್ಮ ದೈವ ಜೂಮಾದಿಯೂ ಇಲ್ಲೇ ಇರುವ ಕಾರಣ ತರವಾಡು ಮನೆಯೂ ಹೌದು.

ಒಬ್ಬ ವ್ಯಕ್ತಿಯ ಜನನ ಆಸ್ಪತ್ರೆಯಲ್ಲಿ ಆಗಬಹುದು. ಆದರೆ  ಆ ಆಸ್ಪತ್ರೆ ಆತನ ಮನೆ ಎಂದಾಗುವುದಿಲ್ಲ. ಅರಮನೆ ಎಂಬುದು ಕೋಟಿ - ಚೆನ್ನಯರ ಸಮುದಾಯದ ಮನೆಯೂ ಅಲ್ಲ, ಕುಟುಂಬದ ಮನೆಯೂ ಅಲ್ಲ. ಅರಮನೆಗೂ ಅವರಿಗೂ ಯಾವುದೇ ಸಂಬಂಧವೂ ಇಲ್ಲ. ಗೆಜ್ಜೆಗಿರಿ ಅವರ ಮೂಲ ಮನೆ ಎಂದು ಗೊತ್ತಿದ್ದೇ ಅರಸನು ಮಕ್ಕಳನ್ನು ಗೆಜ್ಜೆಗಿರಿಗೆ ಕಳುಹಿಸಿಕೊಟ್ಟರು. ಅರಮನೆಯಲ್ಲೇ ಇಟ್ಟು ಬೆಳೆಸಲಿಲ್ಲ.

ತುಳುವರ ಮಾತೃ ಮೂಲ ಪದ್ಧತಿಯ ಪ್ರಕಾರ ಗೆಜ್ಜೆಗಿರಿ ನಂದನ ಬಿತ್ತ್ ಲ್ ಕೋಟಿ - ಚೆನ್ನಯರ ಮೂಲ ಮನೆ ಮತ್ತು ಮೂಲಸ್ಥಾನ.

ಬನ್ನಂಜೆ ಬಾಬು ಅಮೀನ್, ಮೋಹನ್ ಕೋಟ್ಯಾನ್, ದಾಮೋದರ ಕಲ್ಮಾಡಿ, ವಾಮನ ನಂದಾವರ ಮುಂತಾದ ವಿದ್ವಾಂಸರು ಬರೆದ ಕೋಟಿ - ಚೆನ್ನಯರ  ಇತಿಹಾಸ ಪುಸ್ತಕದಲ್ಲಿ ಕೂಡ ಗೆಜ್ಜೆಗಿರಿ ನಂದನ ಬಿತ್ತ್ ಲ್  ಕೋಟಿ- ಚೆನ್ನಯರು ಬಾಳಿ ಬೆಳಗಿದ ಮನೆ ಎಂದೇ ಉಲ್ಲೇಖಿಸಲಾಗಿದೆ ಮತ್ತು ಫೋಟೋ ಕೂಡ ಮುದ್ರಿಸಲಾಗಿದೆ.

ಪ್ರಸ್ತುತ ಗೆಜ್ಜೆಗಿರಿಯಲ್ಲಿ ವೀರರು ನಂಬಿದ್ದ ಧೂಮಾವತಿ ದೈವದ ಸ್ಥಾನ, ಮಾತೆ ದೇಯಿ ಬೈದ್ಯೆತಿಯ ಸಮಾಧಿ, ಮಾತೆ ಬಳಸುತ್ತಿದ್ದ ಅಮೃತ ಸಂಜೀವಿನಿ ಪಾತ್ರೆ, ಆಕೆ ಮಂತ್ರ ಶಕ್ತಿಯಿಂದ ಪಾವನಗೊಳಿಸಿದ ತೀರ್ಥ ಬಾವಿ, ರಾಜ ದಂಡಿಗೆ ಇರಿಸಿದ್ದ ಸರೋಳಿ ಸೈಮಂಜ ಕಟ್ಟೆ, ಸ್ವತಃ ಕೋಟಿ - ಚೆನ್ನಯರು ಬಾಳಿದ್ದ ಮನೆ (ಸ್ವಲ್ಪ ಆಧುನೀಕರಣಗೊಂಡಿದೆ) ಎಲ್ಲವೂ ಇದೆ.

ಕೋಟಿ - ಚೆನ್ನಯರಿಗೆ ಮೂಲ ಮನೆಯಾದ ಮೇಲೆ, ದೇಯಿ ಬೈದ್ಯೆತಿಗೆ ಪುನಜ್ಮನ್ಮ ನೀಡಿದ ಮನೆ ಎಂದಾದ ಮೇಲೆ ಈ ಶಕ್ತಿಗಳಿಗೆ ಮೂಲ ಮನೆಯಾದ ಗೆಜ್ಜೆಗಿರಿಯು ಕೋಟಿ - ಚೆನ್ನಯ ಭಕ್ತರಿಗೂ ಮೂಲಮನೆಯೇ ಅಲ್ಲವೇ?
-ಲೇಖನ : ಫಾಲಾಕ್ಷ

Friday, 18 November 2016

ಡೆನ್ನನ ಡೆನ್ನನ

ಡೆನ್ನನ ಡೆನ್ನನ

ಬೆಳ್ತಂಗಡಿ ಇದೇ ಬರುವ ಭಾನುವಾರ (Nov. 20) ದಂದು ಡೆನ್ನನ ಡೆನ್ನನ ಕಾರ್ಯಕ್ರಮವು ಯುವವಾಹಿನಿ (ರಿ) ಕೇಂದ್ರ ಸಮಿತಿ ಮಂಗಳೂರು ಆಶ್ರಯದಲ್ಲಿ, ಯುವವಾಹಿನಿ (ರಿ) ಬೆಳ್ತಂಗಡಿ ಆತಿಥ್ಯದಲ್ಲಿ‌ ತುಳುನಾಡಿನ ಉಭಯ ಜಿಲ್ಲೆಗಳ ಅಂತರ್ ಘಟಕ ಸಾಂಸ್ಕೃತಿಕ ವೈಭವ ಡೆನ್ನನ ಡೆನ್ನನ, ಬಿಲ್ಲವ ಸಮಾಜದ ದಿಗ್ಗಜರ ಒಗ್ಗೂಡುವಿಕೆಯಲ್ಲಿ ಬಹು ದೊಡ್ಡ ಕಾರ್ಯಕ್ರಮ ನಡೆಯಲಿದೆ.

ಸ್ಥಳ:- ಶ್ರೀ ನಾರಾಯಣ ಗುರು ವಾಣಿಜ್ಯ ಸಂಕೀರ್ಣದ ಆಶಾ ಸಾಲಿಯಾನ್ ಕಲ್ಯಾಣ ಮಂಟಪ ಬೆಳ್ತಂಗಡಿ

ಶ್ರೀ ಕ್ಷೇತ್ರ ಗೆಜ್ಜೆಗಿರಿ ಕ್ಷೇತ್ರ ಮಹಿಮೆ ಸಾರುವ ಭಕ್ತಿಸಾರದ ಸಿ.ಡಿ ಈಗಾಗಲೇ ಬಿಡುಗಡೆಗೊಂಡಿದ್ದು ಈ ಸಿ.ಡಿ ಡೆನ್ನನ ಡೆನ್ನನ ಕಾರ್ಯಕ್ರಮದ ಸ್ಥಳದಲ್ಲಿ ಲಭ್ಯವಿರಲಿದೆ. ಈ ಸಿ.ಡಿ ಯ ಬೆಲೆಯು 100 ರೂ ಆಗಿರುತ್ತದೆ.
ಶ್ರೀ ಸುಧಾಕರ್ ಸುವರ್ಣ ತಿಂಗಳಾಡಿರವರ ಸಾಹಿತ್ಯದಲ್ಲಿ, ಶ್ರೀ ಸುರೇಶ್ ಸಾಲಿಯಾನ್ ಬಜಗೋಳಿ ಹಾಗೂ ಶ್ರೀಮತಿ ನಮಿತಾ ಪ್ರೇಮ್ ರವರ ಸುಮಧುರ ಕಂಠದಲ್ಲಿ ನಿರ್ಮಾಣಗೊಂಡಿದೆ, ಸಿ.ಡಿಯಿಂದ ಬಂದಂತಹ ಎಲ್ಲಾ ಆದಾಯವು ಶ್ರೀ ಕ್ಷೇತ್ರದ ಜೀರ್ಣೋದ್ಧಾರ ಕಾರ್ಯಗಳಿಗೆ ಬಳಕೆಯಾಗಲಿದೆ ಎಂದು ನಿರ್ಮಾತೃ ಶ್ರೀ ರಮೇಶ್ ಸಾಲಿಯಾನ್ ಬಜಗೋಳಿಯವರು ಘೋಷಿಸಿದ್ದು, ಎಲ್ಲಾ ಭಕ್ತಾಭಿಮಾನಿಗಳು ಕ್ಷೇತ್ರದ ಅಭಿವೃದ್ಧಿಗೆ ಕೈ ಜೋಡಿಸೋಣ.

ಡೆನ್ನನ ಡೆನ್ನನ ಕಾರ್ಯಕ್ರಮಕ್ಕೆ ಶುಭವನ್ನು ಕೋರುತ್ತಾ, ತಮ್ಮೆಲ್ಲರನ್ನು ಪ್ರೀತಿಯಿಂದ ಆಮಂತ್ರಿಸುತ್ತಿದ್ದೇವೆ.

ಶ್ರೀ ಕೋಟಿ ಚೆನ್ನಯ ಮೂಲ ಸ್ಥಾನ ಸೇವಾ ಸಮಿತಿ, ಗೆಜ್ಜೆಗಿರಿ ನಂದನ ಬಿತ್ತ್ ಲ್