ಗೆಜ್ಜೆಗಿರಿ ನಂದನ ಬಿತ್ತ್ ಲ್ ಗೆ ಕೋಟಿ ಚೆನ್ನಯ
ಮೂಲಸ್ಥಾನ ಎಂಬ ಹೆಸರು ಯಾಕೆ ಬಂತು?
ಪುತ್ತೂರು ತಾಲೂಕಿನ ಪಡುಮಲೆ ಎಂಬ ಹಳ್ಳಿಯಲ್ಲಿರುವ ಗೆಜ್ಜೆಗಿರಿ ನಂದನ ಬಿತ್ತ್ ಲ್ ಗೆ ಕೋಟಿ - ಚೆನ್ನಯ ಮೂಲಸ್ಥಾನ ಎಂಬ ಹೆಸರು ಯಾಕಿದೆ? ಇಲ್ಲಿ ಓದಿ...
ಗೆಜ್ಜೆಗಿರಿ ನಂದನ ಬಿತ್ತ್ ಲ್ ಎಂಬುದು ಈ ನೆಲದ ಹೆಸರು. ಇಲ್ಲಿದ್ದ ಬಿಲ್ಲವ ಮನೆತನಕ್ಕೆ ಏರಾಜೆ ಬಾರಿಕೆ (ಅಥವಾ ಏರಾಜೆ ಬರ್ಕೆ.) ಎಂಬ ಹೆಸರು. ಪಡುಮಲೆ ಬಲ್ಲಾಳ ಅರಸರ ವ್ಯಾಪ್ತಿಯಲ್ಲಿದ್ದ 4 ಗುತ್ತು ಮತ್ತು 8 ಬಾರಿಕೆಗಳಲ್ಲಿ ಏರಾಜೆ ಬರ್ಕೆಯೂ ಒಂದು. ಅರಸನಿಗೆ ಆಡಳಿತದಲ್ಲಿ ನೆರವಾಗುತ್ತಿದ್ದ ಮನೆತನವಿದು.
ಬಿರ್ಮಣ ಬೈದ್ಯ ಎಂಬ ಹಿರಿಯರು ಇಲ್ಲಿದ್ದರು. ಅವರ ನಂತರ ಇಲ್ಲಿನ ಯಜಮಾನರಾದವರು ಸಾಯನ ಬೈದ್ಯರು. ಬೈದ್ಯ ವಿದ್ಯೆ, ಮಂತ್ರ ವಿದ್ಯೆ, ಶಸ್ತ್ರ ವಿದ್ಯೆ ಎಲ್ಲವನ್ನೂ ಬಲ್ಲವರು ಇವರು. ಬೈದ್ಯ ವಿದ್ಯೆಗೆ ಶೇಂದಿ ಬೇಕಾದ ಕಾರಣ ಮೂರ್ತೆದಾರಿಕೆ ಕೂಡ ಮಾಡುತ್ತಿದ್ದರು.
ಸಾಯನರ ತಂಗಿ ದೇಯಿ. ಆಕೆಯ ಗಂಡ ಕರ್ಗಲ್ಲ ತೋಟ ಕಾಂತಣ್ಣ ಬೈದ್ಯ. ಕಾಂತಣ್ಣ ಬೈದ್ಯರು ಸಾಯನರ ಸೋದರ ಮಾವನ ಮಗ. ಹಾಗಾಗಿ ಭಾವನನ್ನೇ ದೇಯಿ ವರಿಸಿದ್ದಳು. ಅವರಲ್ಲಿ ಹುಟ್ಟಿದ ಹೆಣ್ಣು ಮಗು ದಾರು. ಬಿರ್ಮಣ್ಣ ಬೈದ್ಯರ ಪತ್ನಿಯ ಹೆಸರೂ ದಾರು. ಅಜ್ಜಿಯ ಹೆಸರನ್ನೇ ಮೊಮ್ಮಗಳಿಗೆ ಇಡುವುದು ಹಿಂದಿನ ಕಾಲದ ಕ್ರಮ. ಈಕೆ ಸಣ್ಣ ದಾರುವಾದ ಕಾರಣ ಕಿನ್ನಿ ದಾರು ಎಂದು ಕರೆಯಲಾರಂಭಿಸಿದರು.
ಈ ನಡುವೆ ದೇಯಿ ಅಕಾಲ ಮರಣಕ್ಕೀಡಾದರು. ಕಿನ್ನಿದಾರುವನ್ನು ಎಳೆಯ ಪ್ರಾಯದಲ್ಲೇ ಪಂಜದ ಮಂತ್ರಿ ಪಯ್ಯ ಬೈದ್ಯರಿಗೆ ಮದುವೆ ಮಾಡಿ ಕೊಡಲಾಯಿತು.
ಇದಾದ ಬಳಿಕ ಸಂಕಮಲೆ ಕಾಡಿಗೆ ಹೋದ ಸಂದರ್ಭದಲ್ಲಿ ಸುವರ್ಣ ಕೇದಗೆ ಎಂಬ ಬಾಲಕಿ ಸಾಯನ ಬೈದ್ಯರಿಗೆ ಸಿಗುತ್ತಾಳೆ. ಸಾಕು ತಂದೆಯಾದ ಬ್ರಾಹ್ಮಣರು ಆಕೆಯನ್ನು ಕಾಡಿನಲ್ಲಿ ಬಿಟ್ಟಿರುತ್ತಾರೆ. ಸಾಯನರು ಈ ಬಾಲಕಿಯನ್ನು ಗೆಜ್ಜೆಗಿರಿಗೆ ಕರೆ ತಂದು ತಂಗಿಯ ಸ್ಥಾನ ನೀಡುತ್ತಾರೆ. ಗತಿಸಿ ಹೋದ ತಂಗಿ ದೇಯಿಯ ಹೆಸರನ್ನೇ ಇಡುತ್ತಾರೆ. ತನ್ನಲ್ಲಿದ್ದ ಮಂತ್ರ ಮತ್ತು ಬೈದ್ಯ ಶಕ್ತಿಯನ್ನು ದೇಯಿ ಬೈದ್ಯೆತಿಗೆ ಧಾರೆ ಎರೆದು ಕೊಡುತ್ತಾರೆ. ಆಕೆ ಬಿಲ್ಲವ ಹೆಣ್ಣಾಗಿ ಪರಿವರ್ತನೆ ಆಗುತ್ತಾಳೆ. ಏಕಾಂಗಿಯಾಗಿದ್ದ ಕಾಂತಣ್ಣ ಬೈದ್ಯರಿಗೆ ಈಕೆಯನ್ನೂ ಮದುವೆ ಮಾಡುತ್ತಾರೆ.
ಗರ್ಭಿಣಿಯಾದ ದೇಯಿ ಬೈದ್ಯೆತಿ ಮೊದಲ ಹೆರಿಗೆಗಾಗಿ ತನ್ನ ತವರು ಮನೆಯಾದ ಗೆಜ್ಜೆಗಿರಿ ಬರುತ್ತಾರೆ. ಈ ಸಂದರ್ಭದಲ್ಲೇ ಅರಸನ ಕಾಲಿಗೆ ಮದ್ದು ಮಾಡಲು ಕರೆ ಬರುತ್ತದೆ. ಅರಮನೆಗೆ ಹೋದ ದೇಯಿ ಮಾತೆಯ ಔಷಧದಿಂದ ಅರಸರು ಗುಣಮುಖರಾಗುತ್ತಾರೆ.
ತಾನು ಬಂದ ಕೆಲಸ ಆಯಿತೆಂದು ಮಾತೆ ತವರಿಗೆ ಹೊರಟು ಬರುತ್ತಾರೆ. ಗದ್ದೆಯಲ್ಲಿ ಬರುತ್ತಿರುವಾಗ ಹೆರಿಗೆ ನೋವು ಕಾಣಿಸಿಕೊಳ್ಳುತ್ತದೆ. ಬೇರೆ ದಾರಿ ಇಲ್ಲದೆ ಅರಮನೆ ಪಕ್ಕದ ಗುಡಿಸಲಿನಲ್ಲಿ ಹೆರಿಗೆಗೆ ಅವಕಾಶ ಮಾಡಿಕೊಡುತ್ತಾರೆ. ಅವಳಿ ಮಕ್ಕಳ ಜನನವಾಗುತ್ತದೆ. 16ನೇ ದಿನದ ಅಮೆ ಕಳೆಯುವ ಮೊದಲೇ ದೇಯಿ ಮಾತೆ ಕೆರೆಗೆ ಬಿದ್ದು ಪ್ರಾಣ ಕಳೆದುಕೊಳ್ಳುತ್ತಾರೆ.
ಸಹಜವಾಗಿ ಆಕೆಯ ಕಳೇಬರವನ್ನು ಅರಸರು ಗೆಜ್ಜೆಗಿರಿಗೆ ಕಳುಹಿಸಿ ಕೊಡುತ್ತಾರೆ. ಸಾಯನರು ತನ್ನ ನೆಲದಲ್ಲಿ ತಂಗಿಯ ಪಾರ್ಥಿವ ಶರೀರದ ದಫನ ಮಾಡುತ್ತಾರೆ.
ಮಾವ ಸಾಯನರ ಸಮ್ಮುಖ ಅವಳಿ ಮಕ್ಕಳಿಗೆ ಕೋಟಿ - ಚೆನ್ನಯ ಎಂಬ ಹೆಸರನ್ನಿಟ್ಟ ಕುಜುಂಬ ಮುದ್ಯ (ಪೆರುಮಳ ಬಲ್ಲಾಳ) ಅರಸರು ಆರೇಳು ತಿಂಗಳುಗಳ ಬಳಿಕ ಮಕ್ಕಳನ್ನು ಅವರ ಸ್ವಂತ ಮನೆಯಾದ ಗೆಜ್ಜೆಗಿರಿ ಮಾವನೊಂದಿಗೆ ಕಳುಹಿಸಿ ಕೊಡುತ್ತಾರೆ.
ತಮ್ಮ ಸ್ವಂತ ಮನೆಯಾದ ಗೆಜ್ಜೆಗಿರಿಯಲ್ಲೇ ವೀರ ಬಾಲಕರು ಬೆಳೆಯುತ್ತಾರೆ. ಶೈಶಾವಸ್ಥೆಯಲ್ಲೇ ತಂದೆಯೂ ಕಾಲವಾದ ಕಾರಣ ತಾಯಿ ಮತ್ತು ಮಾವನ ಮನೆಯಾದ ಗೆಜ್ಜೆಗಿರಿಯೇ ಅವರ ವಾಸ್ತವ್ಯವ ಮನೆಯೂ ಆಗುತ್ತದೆ. ಪಡುಮಲೆಯಲ್ಲಿ ಇದ್ದಷ್ಟು ಸಮಯ ಅವರು ಇದ್ದಿದ್ದು ಇದೇ ಮನೆಯಲ್ಲಿ.
ಹೀಗಾಗಿ ಗೆಜ್ಜೆಗಿರಿ ಎಂಬುದು ಕೋಟಿ - ಚೆನ್ನಯರ ಸ್ವಂತ ಮನೆಯೂ ಹೌದು, ತಾಯಿಯ ತವರು ಮನೆಯೂ ಹೌದು, ಕುಟುಂಬದ ಧರ್ಮ ದೈವ ಜೂಮಾದಿಯೂ ಇಲ್ಲೇ ಇರುವ ಕಾರಣ ತರವಾಡು ಮನೆಯೂ ಹೌದು.
ಒಬ್ಬ ವ್ಯಕ್ತಿಯ ಜನನ ಆಸ್ಪತ್ರೆಯಲ್ಲಿ ಆಗಬಹುದು. ಆದರೆ ಆ ಆಸ್ಪತ್ರೆ ಆತನ ಮನೆ ಎಂದಾಗುವುದಿಲ್ಲ. ಅರಮನೆ ಎಂಬುದು ಕೋಟಿ - ಚೆನ್ನಯರ ಸಮುದಾಯದ ಮನೆಯೂ ಅಲ್ಲ, ಕುಟುಂಬದ ಮನೆಯೂ ಅಲ್ಲ. ಅರಮನೆಗೂ ಅವರಿಗೂ ಯಾವುದೇ ಸಂಬಂಧವೂ ಇಲ್ಲ. ಗೆಜ್ಜೆಗಿರಿ ಅವರ ಮೂಲ ಮನೆ ಎಂದು ಗೊತ್ತಿದ್ದೇ ಅರಸನು ಮಕ್ಕಳನ್ನು ಗೆಜ್ಜೆಗಿರಿಗೆ ಕಳುಹಿಸಿಕೊಟ್ಟರು. ಅರಮನೆಯಲ್ಲೇ ಇಟ್ಟು ಬೆಳೆಸಲಿಲ್ಲ.
ತುಳುವರ ಮಾತೃ ಮೂಲ ಪದ್ಧತಿಯ ಪ್ರಕಾರ ಗೆಜ್ಜೆಗಿರಿ ನಂದನ ಬಿತ್ತ್ ಲ್ ಕೋಟಿ - ಚೆನ್ನಯರ ಮೂಲ ಮನೆ ಮತ್ತು ಮೂಲಸ್ಥಾನ.
ಬನ್ನಂಜೆ ಬಾಬು ಅಮೀನ್, ಮೋಹನ್ ಕೋಟ್ಯಾನ್, ದಾಮೋದರ ಕಲ್ಮಾಡಿ, ವಾಮನ ನಂದಾವರ ಮುಂತಾದ ವಿದ್ವಾಂಸರು ಬರೆದ ಕೋಟಿ - ಚೆನ್ನಯರ ಇತಿಹಾಸ ಪುಸ್ತಕದಲ್ಲಿ ಕೂಡ ಗೆಜ್ಜೆಗಿರಿ ನಂದನ ಬಿತ್ತ್ ಲ್ ಕೋಟಿ- ಚೆನ್ನಯರು ಬಾಳಿ ಬೆಳಗಿದ ಮನೆ ಎಂದೇ ಉಲ್ಲೇಖಿಸಲಾಗಿದೆ ಮತ್ತು ಫೋಟೋ ಕೂಡ ಮುದ್ರಿಸಲಾಗಿದೆ.
ಪ್ರಸ್ತುತ ಗೆಜ್ಜೆಗಿರಿಯಲ್ಲಿ ವೀರರು ನಂಬಿದ್ದ ಧೂಮಾವತಿ ದೈವದ ಸ್ಥಾನ, ಮಾತೆ ದೇಯಿ ಬೈದ್ಯೆತಿಯ ಸಮಾಧಿ, ಮಾತೆ ಬಳಸುತ್ತಿದ್ದ ಅಮೃತ ಸಂಜೀವಿನಿ ಪಾತ್ರೆ, ಆಕೆ ಮಂತ್ರ ಶಕ್ತಿಯಿಂದ ಪಾವನಗೊಳಿಸಿದ ತೀರ್ಥ ಬಾವಿ, ರಾಜ ದಂಡಿಗೆ ಇರಿಸಿದ್ದ ಸರೋಳಿ ಸೈಮಂಜ ಕಟ್ಟೆ, ಸ್ವತಃ ಕೋಟಿ - ಚೆನ್ನಯರು ಬಾಳಿದ್ದ ಮನೆ (ಸ್ವಲ್ಪ ಆಧುನೀಕರಣಗೊಂಡಿದೆ) ಎಲ್ಲವೂ ಇದೆ.
ಕೋಟಿ - ಚೆನ್ನಯರಿಗೆ ಮೂಲ ಮನೆಯಾದ ಮೇಲೆ, ದೇಯಿ ಬೈದ್ಯೆತಿಗೆ ಪುನಜ್ಮನ್ಮ ನೀಡಿದ ಮನೆ ಎಂದಾದ ಮೇಲೆ ಈ ಶಕ್ತಿಗಳಿಗೆ ಮೂಲ ಮನೆಯಾದ ಗೆಜ್ಜೆಗಿರಿಯು ಕೋಟಿ - ಚೆನ್ನಯ ಭಕ್ತರಿಗೂ ಮೂಲಮನೆಯೇ ಅಲ್ಲವೇ?
-ಲೇಖನ : ಫಾಲಾಕ್ಷ
No comments:
Post a Comment