Monday, 28 November 2016

ಅವಳಿ ವೀರರು ಕೋಟಿ ಚೆನ್ನಯರು

ಕೋಟಿ-ಚೆನ್ನಯರ ಕಾಲದಲ್ಲಿ ಸಣ್ಣಪುಟ್ಟ ತುಂಡರಸರ ಅವರ ಕೈಕೆಳಗಿನ ಮಂತ್ರಿ, ಸೇನಾಪತಿ ಮೊದಲಾದವರ ದೌರ್ಜನ್ಯ ದಬ್ಬಾಳಿಕೆಯನ್ನು ಪ್ರತಿಭಟಿಸುವರೇ ಇರಲಿಲ್ಲ. ಎದುರಾಡಿದವ ಹೆಣವಾಗುತ್ತಿದ್ದ. ಇಲ್ಲವೆ ಪೆಟ್ಟು ತಿನ್ನುತ್ತಿದ್ದ. ಇಂತಹ ಕಾಲಘಟ್ಟದಲ್ಲಿ ಅನ್ಯಾಯವನ್ನು ಪ್ರತಿಭಟಿಸಿ ದುಷ್ಟಮಂತ್ರಿಗೆ ಅಂತ್ಯ ಕಾಣಿಸಿದ ಈ ವೀರರು ತಮ್ಮ ಅಸಾಮಾನ್ಯ ಸಾಧನೆಯಿಂದ ತುಳುನಾಡಿನ ಜನರ ಪಾಲಿಗೆ ಅತಿಮಾನುಷರೆನೆಸಿಕೊಳ್ಳುತ್ತಾರೆ. ಕೆಚ್ಚೆದೆಯ ಈ ಯಮಳ ವೀರರು ನ್ಯಾಯ ಧರ್ಮಕ್ಕಾಗಿ ತಮ್ಮ ಜೀವನವನ್ನೆ ಮುಡಿಪಾಗಿಟ್ಟು ವೀರ ಮರಣವನ್ನು ಪಡೆದರು. (ಅವಿವಾಹಿತರಾಗಿದ್ದ ಅವರಿಗೆ ಮರಣ ಕಾಲದಲ್ಲಿ 37 ವರ್ಷ ವಯಸ್ಸಾಗಿತ್ತು ಎಂದು ಹೇಳುತ್ತಾರೆ) ಅವರ ಅಸಾಮಾನ್ಯ ಧರ್ಯ ಸಾಹಸಗಳು, ದೌರ್ಜನ್ಯ ದಬ್ಬಾಳಿಕೆಯ ವಿರುದ್ಧವಾದ ನ್ಯಾಯ ಪರವಾದ ಹೋರಾಟವು ಶೋಷಿತರ ಪ್ರತಿಭಟನಾತ್ಮಕ ಧ್ವನಿಯಾಗಿದೆ. ಈ ಪ್ರತಿಭಟನೆಯ ಮೂಲ ಪುರುಷರಾದ ಕೋಟಿ-ಚೆನ್ನಯರು ಅವರ ಆರಾಧ್ಯ ಪುರುಷರಾಗಿ ಶಾಶ್ವತ ಸ್ಥಾನ ಪಡೆದಿರುತ್ತಾರೆ. ಶೋಷಿತ ವರ್ಗದ ಜನರ ಆಂತರ್ಯದ ನೋವು ದೌರ್ಜನ್ಯದ ವಿರುದ್ಧ ಸಮರ ಸಾರಿದ ಬೈದರ್ಕಳರನ್ನು ಆರಾಧ್ಯ ದೈವವಾಗಿ ಸ್ವೀಕರಿಸುವಂತೆ ಮಾಡಿತು. ಅತಿಮಾನುಷರಾದ ಬೈದರ್ಕಳರು ತಮ್ಮ ವೀರ ಅವಸಾನದ ನಂತರವೂ ಜನ್ರ ಸಂಕಷ್ಟಗಳನ್ನು ಪರಿಹರಿಸುವ ಬೇಡಿಕೆಗಳನ್ನು ಈಡೇರಿಸುವ ಕಾರಣಿಕದ ದೈವಗಳಾಗಿ
"ನ್ಯಾಯೊಗು ತಿಗಲೆಡ್ ಸಾದಿ ಕೊರ್ಪ"
"ಅನ್ಯಾಯೊಗು ಸುರಿಯೊಡು ಸಾದಿ ಕೊರ್ಪ"
"ನಂಬಿನಕ್ಲೆಗ್ ಇಂಬು ಕೊರ್ಪ"
"ಸತ್ಯ ಗೆಂದಾದ್ ಕೊರ್ಪ"
ಎಂಬ ಅಭಯದ ನುಡಿಯಲ್ಲಿ ತುಳುನಾಡಿನಾದ್ಯಂತ ಗರೋಡಿಗಳಲ್ಲಿ ಆರಾಧನೆಗೆ ಒಳಪಟ್ಟಿದ್ದಾರೆ.
ಈಗ ತುಳುನಾಡಿನ ಕಲೆ ಕಾರಣಿಕದ ವೀರ ಪುರುಷರಾದ ಕೋಟಿ-ಚೆನ್ನಯ ಮೂಲಸ್ಥಾನವಾದ ಶ್ರೀ ಕ್ಷೇತ್ರ ಗೆಜ್ಜೆಗಿರಿ ನಂದನ ಬಿತ್ತ್‌ಲ್‌ನಲ್ಲಿ ಕೋಟಿ-ಚೆನ್ನಯರ ಗರೋಡಿ ನಿರ್ಮಣನಕ್ಕೆ ಚಾಲನೆ ಸಿಕ್ಕಿರುವುದು ತುಳುನಾಡಿನಾದ್ಯಂತ ಕೋಟಿ-ಚೆನ್ನಯ ಭಕ್ತರಿಗೆ ಹೊಸ ಸಂಚಲನವನ್ನು ಮೂಡಿಸಿದೆ.

No comments:

Post a Comment