Saturday, 22 October 2016

ಸುರಿಯ

ಗೆಜ್ಜೆಗಿರಿಗೆ ಬಂತು
ಕೋಟಿ ಚೆನ್ನಯರ ಸುರಿಯ

450 ವರ್ಷಗಳ ಹಿಂದೆ ತಾವು ಓಡಾಡಿ ಬೆಳೆದಿದ್ದ ಪಡುಮಲೆಯ ಗೆಜ್ಜೆಗಿರಿ ನಂದನ ಬಿತ್ತ್ ಲ್ ಗೆ ಅವಳಿ ವೀರರು ಕೋಟಿ ಚೆನ್ನಯರು ಮತ್ತೆ ಬರುವ ಕಾಲ ಸನ್ನಿಹಿತವಾಗಿದೆ. ಸಾಯನ ಬೈದ್ಯರು ಮತ್ತು ಮಾತೆ ದೇಯಿ ಬೈದ್ಯೆತಿಯ ಮೂಲಸ್ಥಾನವಾದ ಗೆಜ್ಜೆಗಿರಿಯು ಅವಳಿ ವೀರರಿಗೂ ಮೂಲ ಮನೆಯಾಗಿದ್ದು, ಕ್ಷೇತ್ರದಲ್ಲಿ ಮೂಲಸ್ಥಾನ ಗರಡಿ ನಿರ್ಮಾಣದ ಪ್ರಕ್ರಿಯೆ ಶುರುವಾಗಿದೆ. ಆಗಲೇ ಕೋಟಿ - ಚೆನ್ನಯರು ಇಲ್ಲಿಗೆ ಸುರಿಯ ರೂಪದಲ್ಲಿ ಬಂದಿದ್ದಾರೆ.
ಈ ರೋಮಾಂಚನಕಾರಿ ಕಥೆಯನ್ನು ಓದಿ.
ಇದು ಎರಡು ತಿಂಗಳ ಹಿಂದೆ ನಡೆದ ಘಟನೆ. ಪುತ್ತೂರು ತಾಲೂಕಿನ ಮೂಡಣ ದಿಕ್ಕಿನಲ್ಲಿರುವ ಬಿಲ್ಲವೇತರ ಸಮುದಾಯದ ಜಮೀನಿನಲ್ಲಿ ನಡೆದ ಪ್ರಶ್ನೆಯಲ್ಲಿ ಸೋಜಿಗದ ವಿಚಾರ ಕಂಡು ಬಂತು. ಈ ಜಮೀನಿನಲ್ಲಿ ಹಿಂದೆ ಬಿಲ್ಲವರು ಕೋಟಿ - ಚೆನ್ನಯರನ್ನು ಆರಾಧಿಸಿದ್ದರು. ಹೀಗಾಗಿ ನೀವು ಕೂಡಾ ಆರಾಧಿಸಬೇಕು ಎಂದು. ಅದು ಸಾಧ್ಯವಾಗದಿದ್ದರೆ ಕೋಟಿ- ಚೆನ್ನಯರ ಮೂಲಕ್ಷೆತ್ರಕ್ಕೆ ಸುರಿಯ, ಬಂಗಾರದ ಹೂ ಮತ್ತು ಕುರುಂಟು ಒಪ್ಪಿಸಬೇಕು ಎಂದು ಕಂಡು ಬಂತು. ಕೋಟಿ- ಚೆನ್ನಯರ ಮೂಲಕ್ಷೇತ್ರ ಯಾವುದು ಎಂದು ತಿಳಿಯದ ಆ ಕುಟುಂಬ ಎಣ್ಮೂರು ಆಗಿರಬಹುದು ಎಂದು ಭಾವಿಸಿ ಕೇಳಿತು. ಪ್ರಶ್ನೆಯಲ್ಲಿ ಅದು ಅಲ್ಲ, ವೀರರ ಮೂಲ ಮನೆಗೆ ಒಪ್ಪಿಸಬೇಕು ಎಂದು ಕಂಡು ಬಂತು. ಇದಾದ ಬಳಿಕ ಆ ಮನೆಯವರು ಊರಿನ ಕೆಲವರಲ್ಲಿ ಮಾಹಿತಿ ಪಡೆದು ನೇರವಾಗಿ ಗೆಜ್ಜೆಗಿರಿ ನಂದನ ಕ್ಷೇತ್ರಕ್ಕೆ ಬಂದು ಯಜಮಾನರಲ್ಲಿ ವಿಷಯ ತಿಳಿಸಿದರು. ಆಗ ಅವರಂದರು- ಇದು ಮೂಲಕ್ಷೇತ್ರ ನಿಜ. ಆದರೆ ಕೋಟಿ - ಚೆನ್ನಯರು ಇಲ್ಲಿಗೆ ಸುರಿಯ ಒಪ್ಪಿಸಲು ಬಯಸುತ್ತಾರೋ ಅಥವಾ ಪಡುಮಲೆ ಅರಮನೆಗೆ ಒಪ್ಪಿಸಲು ಬಯಸುತ್ತಾರೊ ಗೊತ್ತಿಲ್ಲ. ಅದನ್ನು ನೀವು ಮತ್ತೆ ಪ್ರಶ್ನೆಯಲ್ಲಿ ಕೇಳಿಕೊಂಡು ಬನ್ನಿ ಎಂದು ಹೇಳುವ ಮೂಲಕ ಪ್ರಾಮಾಣಿಕತೆ ಮೆರೆದರು.
ಅದರಂತೆ ಆ ಮನೆಯವರು ಮತ್ತೆ ಪ್ರಶ್ನೆ ಚಿಂತನಾಕಾರರ ಬಳಿ ತೆರಳಿದರು. ಅಲ್ಲಿ ಗೆಜ್ಜೆಗಿರಿ ಮತ್ತು  ಪಡುಮಲೆ ಅರಮನೆ ಎರಡೂ ಜಾಗವನ್ನು ಚಿಂತಿಸಿದಾಗ -ಪೂರ್ಣ ಪ್ರಮಾಣದಲ್ಲಿ ಗೆಜ್ಜೆಗಿರಿ ನಂದನಕ್ಕೆ ಅರ್ಪಿಸಬೇಕು, ಅದು ಕೋಟಿ - ಚೆನ್ನಯರ ಮೂಲಕ್ಷೇತ್ರ ಎಂದು ಕಂಡು ಬಂತು. ಅದರಂತೆ ಆ ಮನೆಯವರು ಸುರಿಯ, ಬಂಗಾರದ ಹೂ ಮತ್ತು ಕುರುಂಟು ತಂದು ಗೆಜ್ಜೆಗಿರಿ ಕ್ಷೇತ್ರಕ್ಕೆ ಒಪ್ಪಿಸಿದ್ದಾರೆ.
ಮೂಲಸ್ಥಾನ ಗರಡಿ ನಿರ್ಮಾಣಕ್ಕೆ ಮೊದಲೇ, ತಾವು ಗೆಜ್ಜೆಗಿರಿಗೆ ಬರುವುದನ್ನು ಕಾರಣಿಕ ಶಕ್ತಿಗಳು ಸ್ಪಷ್ಟವಾಗಿ ಸೂಚಿಸುವ ಮೂಲಕ ಪವಾಡ ಮೆರೆದಿದ್ದಾರೆ. ಹರಕೆ ರೂಪದಲ್ಲಿ ಬಂದ ಸುರಿಯ ಈಗ ಗೆಜ್ಜೆಗಿರಿಯ ಧೂಮಾವತಿ  ಸಾನಿಧ್ಯದ ಪಾರ್ಶ್ವದಲ್ಲಿ ಕಂಗೊಳಿಸುತ್ತಿದೆ. ಈಗ ತಿಳಿಯಿತೇ ಗೆಜ್ಜೆಗಿರಿ ಮಣ್ಣಿನ ಮಹತ್ವ...!

No comments:

Post a Comment